ವಿಠಲ್, ಎಂ ಆರ್
	(1908-1994). ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರು. ಮೈಸೂರು ರಾಘವೇಂದ್ರರಾವ್ ವಿಠಲ್ ಎಂಬುದು ಇವರ ಪೂರ್ಣ ಹೆಸರು. 1908 ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಎಂ. ರಾಘವೇಂದ್ರರಾವ್, ತಾಯಿ ಗಂಗಾ ಬಾಯಿ. ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್.ಸಿ ಮುಗಿಸಿದರು. ಅನಂತರ ಇಂಟರ್‍ಮೀಡಿಯೇಟ್ ಮುಗಿಸಿ, ಎಂಜಿನಿಯರಿಂಗ್ ಅಂಡ್ ಫ್ಲೈಯಿಂಗ್‍ನಲ್ಲಿ ಮೂರು ವರ್ಷಗಳ ಅವಧಿಯ ಶಿಕ್ಷಣವನ್ನು ಪಡೆಯಲು ಮದರಾಸಿನ ಆಂಧ್ರ ಏವಿಯೇಷನ್ ಸ್ಕೂಲ್‍ಗೆ ಸೇರಿದರು. ಬ್ರಿಟಿಷ್ ಸರ್ಕಾರ ಈ ಶಾಲೆಯನ್ನು ಅನಿರೀಕ್ಷಿತವಾಗಿ ಸ್ಥಗಿತಗೊಳಿಸಿದ್ದರಿಂದ ಮೊದಲನೆಯ ವರ್ಷದ ಶಿಕ್ಷಣವನ್ನು ಪೂರ್ಣಗೊಳಿಸಿ, ಕಾಲೇಜು ಸೇರಿ ಆಟೊಮೊಬೈಲ್ ಎಂಜಿನಿಯರಿಂಗ್‍ನಲ್ಲಿ ಎರಡು ವರ್ಷಗಳ ಶಿಕ್ಷಣ ಪಡೆದು ಆ ಉದ್ಯಮಕ್ಕೆ ಪದಾರ್ಪಣ ಮಾಡಿದರು. ಅನಂತರ 1928-29ರಲ್ಲಿ ಮುಂಬಯಿಗೆ ಹೋದರು. ಅಲ್ಲಿ ಕೆಲವಾರು ವರ್ಷಗಳು ಇದ್ದು, ಅನಂತರ ಕೊಲ್ಲಾಪುರದಲ್ಲಿ ಸ್ವಂತವಾಗಿ ಗ್ಯಾರೇಜ್ ಸ್ಥಾಪಿಸಿದರು. ಆಗ್ಗೆ ಕೊಲ್ಲಾಪುರ ಸಿನಿಟೋನ್ ಎಂಬ ಸಂಸ್ಥೆ ಅತ್ಯಂತ ಉಚ್ಛ್ರಾಯಸ್ಥಿತಿಯಲ್ಲಿತ್ತು. ಅದರ ಮಾಲೀಕರಾಗಿದ್ದ ದಾದಾ ಸಾಹೇಬ್ ನಿಂಬಾಳ್ಕರ್ ಅವರು ಇವರನ್ನು ಸೌಂಡ್ ಎಂಜಿನಿಯರ್ ಹುದ್ದೆಗೆ ಆಹ್ವಾನಿಸಿದರು. ಅಲ್ಲಿದ್ದಾಗ ಇವರಿಗೆ ದಾದಾಸಾಹೇಬ್ ಫಾಲ್ಕೆ ಅವರ ಪರಿಚಯಭಾಗ್ಯ ಒದಗಿಬಂತು. ನಿರ್ದೇಶನದ ಅನೇಕ ವಿಚಾರಗಳನ್ನು ಫಾಲ್ಕೆ ಅವರಿಂದ ತಿಳಿದುಕೊಂಡರು. ಅಲ್ಲಿಂದ 1930ರಲ್ಲಿ ಲಾಹೋರಿಗೆ ಪ್ರಯಾಣ ಬೆಳೆಸಿ ಅಲ್ಲಿ ಸೂಪರ್ ಸೌಂಡ್ ಸ್ಟುಡಿಯೋದಲ್ಲಿ ಸೌಂಡ್ ಎಂಜಿನಿಯರ್ ಆಗಿ ಅಲೋಕಿ ದುನಿಯಾ ಎಂಬ ಚಿತ್ರಕ್ಕೆ ಪ್ರಪ್ರಥಮವಾಗಿ ಶಬ್ದಗ್ರಹಣ ಮಾಡಿದರು. ಪ್ರಸಿದ್ಧ ನಟನಟಿಯರಾಗಿದ್ದ ಸುರೇಂದ್ರ ಮತ್ತು ಊರ್ಮಿಳಾ ನಾಯಕ-ನಾಯಕಿಯ ರಾಗಿದ್ದ ಟಾಕಿ ಚಿತ್ರವೊಂದನ್ನು ಪ್ರಪ್ರಥಮವಾಗಿ ದಿಗ್ದರ್ಶಿಸಿ ನಿರ್ದೇಶಕನ ಹಂತಕ್ಕೇರಿದರು. ಕೈತುಂಬ ಕೆಲಸವಿದ್ದರೂ ಅಲ್ಲಿಯ ವಾತಾವರಣ ಹಿಡಿಸದೆ ಮುಂಬಯಿಗೆ ಮರಳಿದರು.

	1939ರಲ್ಲಿ ಮದರಾಸು ಸರ್ಕಾರ ಸಾಕ್ಷ್ಯಚಿತ್ರಗಳ ತಯಾರಿಕೆಗೆ ಆಹ್ವಾನ ನೀಡಿತು. ಹಲವಾರು ಸಾಕ್ಷ್ಯಚಿತ್ರಗಳ ನಿರ್ಮಾಣವನ್ನು ಮದರಾಸಿನಲ್ಲಿ ಕೈಗೊಂಡರು. ಈ ಮಧ್ಯೆ ಯುದ್ಧಾನಂತರ ಎ.ಜೆ.ಪಟೇಲ್ ಎಂಬವರು ಭಾರತಾದ್ಯಂತ ಸುದ್ದಿಚಿತ್ರಗಳನ್ನು ತಯಾರಿಕೆ ಆರಂಭಿಸಿದರು. ಮದರಾಸು ಕಚೇರಿಯ ಮ್ಯಾನೇಜರ್ ಹುದ್ದೆಗೆ ವಿಠಲ್ ಆಯ್ಕೆಮಾಡಿಕೊಂಡರು. ಕಾಲಕ್ರಮೇಣ ಸರ್ಕಾರ ಈ ಶಾಖೆಗಳನ್ನೆಲ್ಲ ಕೊಂಡುಕೊಂಡಿತು. ಚಿತ್ರರಂಗದಲ್ಲಿ ತಾಂತ್ರಿಕ ವಿಭಾಗದಲ್ಲಿ ಹೆಚ್ಚಿನ ತರಬೇತಿ ಪಡೆಯಲು 1949ರಲ್ಲಿ ವಿಠಲ್ ಯುರೋಪ್ ಪ್ರವಾಸ ಕೈಗೊಂಡರು. ಬೆಲ್ಜಿಯಮ್‍ನ ಗೇವರ್ಟ್ ಕಾರ್ಖಾನೆಯಲ್ಲಿ ಆಳವಾದ ಅಧ್ಯಯನ ನಡೆಸಿ ಅಲ್ಲಿಂದ ಫ್ರಾನ್ಸ್‍ಗೆ ತೆರಳಿ ಎಕ್ಲರ್ ಸ್ಟುಡಿಯೋದಲ್ಲಿ ಸ್ವಲ್ಪಕಾಲ ಇದ್ದರು. ಅನಂತರ ತಾಂತ್ರಿಕ ವಿಭಾಗದಲ್ಲಿ ಸಾಕಷ್ಟು ತರಬೇತಿ ಪಡೆಯಲು ಇಚ್ಛಿಸಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಸ್ವಲ್ಪ ಕಾಲವಿದ್ದು 1950ರಲ್ಲಿ ಭಾರತಕ್ಕೆ ಮರಳಿದರು.

	ಮದರಾಸಿನಲ್ಲಿ ನೆಲೆನಿಂತು ಮಲಯಾಳಂ ಚಿತ್ರವೊಂದನ್ನು ನಿರ್ದೇಶಿಸಿದರು. ಚಿತ್ರ ಸಾಕಷ್ಟು ಯಶಸ್ವಿಯಾಗದೆ ಇವರಿಗೆ ಅಪಾರ ನಷ್ಟವುಂಟಾಯಿತು. ಪರಿಣಾಮವಾಗಿ ಸ್ವಲ್ಪಕಾಲ ಚಿತ್ರರಂಗದಿಂದ ದೂರವಾದರು. ಪುನಿತವತಿ ಎಂಬ ತಮಿಳುಚಿತ್ರದ ನಿರ್ದೇಶಕರಾಗಿ ಮತ್ತೆ ಚಿತ್ರರಂಗ ಪ್ರವೇಶಿಸಿದರು.

	1962ರಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿ ಮೊತ್ತಮೊದಲನೆಯ ಬಾರಿಗೆ ನಂದಾದೀಪ ಎಂಬ ಕನ್ನಡ ಚಿತ್ರವನ್ನು ದಿಗ್ದರ್ಶಿಸಿದರು. ಅಲ್ಲಿಂದ ಮುಂದೆ ಮಂಗಳಮುಹೂರ್ತ, ಮಿಸ್ ಲೀಲಾವತಿ, ಪ್ರೇಮಮಯಿ, ನಕ್ಕರೆ ಅದೇ ಸ್ವರ್ಗ, ಮನಸ್ಸಿದ್ದರೆ ಮಾರ್ಗ, ಹಣ್ಣೆಲೆ ಚಿಗುರಿದಾಗ, ಕಣ್ಣುಮುಚ್ಚಾಲೆ, ಮಾರ್ಗದರ್ಶಿ, ಎರಡುಮುಖ, ಬಾಳಪಂಜರ, ಯಾರ ಸಾಕ್ಷಿ, ಪ್ರೊಫೆಸರ್ ಹುಚ್ಚೂರಾಯ, ಕೂಡಿ ಬಾಳೋಣ, ಅಣ್ಣ-ಅತ್ತಿಗೆ, ಪುನರ್ಮಿಲನ ಮೊದಲಾದ ಕನ್ನಡ ಚಿತ್ರಗಳನ್ನು ದಿಗ್ದರ್ಶಿಸಿದರು.

ನಂದಾದೀಪ (1963), ಮಿಸ್ ಲೀಲಾವತಿ (1965), ಚಿತ್ರಗಳಿಗೆ ಕೇಂದ್ರ ಸರಕಾರದ ಪ್ರಾದೇಶಿಕ ಅರ್ಹತಾ ಪ್ರಶಸ್ತಿ ದೊರೆತಿದೆ. ಹೆಣ್ಣೆಲೆ ಚಿಗುರಿದಾಗ ಚಿತ್ರಕ್ಕೆ (1968-69)ರ ನಕ್ಕರೆ ಅದೇ ಸ್ವರ್ಗ ಚಿತ್ರಕ್ಕೆ (1966-67)ರ ಎರಡು ಮುಖ ಚಿತ್ರಕ್ಕೆ (1969-70) ಅತ್ತಯುತ್ತ ಚಿತ್ರ ಪ್ರಶಸ್ತಿ ದೊರೆತಿದೆ. ಚಿತ್ರೋದ್ಯಮಕ್ಕೆ ಎಂ.ಆರ್.ವಿಠಲ್ ನೀಡಿದ ಸಮಗ್ರ ಸೇವೆಯನ್ನು ಪರಿಗಣಿಸಿ (1991-92) ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಚಿತ್ರ ನಿರ್ಮಾಣ ಆರಂಭಕ್ಕೆ ಮುನ್ನ ಪೂರ್ಣ ಚಿತ್ರಕಥೆಯನ್ನು ಸಿದ್ಧಪಡಿಸಿ, ನಂತರವೇ ಚಿತ್ರನಿರ್ಮಾಣಕ್ಕೆ ತೊಡಗುವ ಶಿಸ್ತುಗಾರ. ದಿ ಆರ್ಟ್ ಆಫ್ ಡೈರೆಕ್ಷನ್ ಎಂಬ ಪುಸ್ತಕ ಚಲನಚಿತ್ರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ. ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ಬರೋಡದಲ್ಲಿ ಕಳೆದರು. ಅಲ್ಲೇ 1994ರಲ್ಲಿ ವಿಧಿವಶರಾದರು. 
	(ಎಸ್.ಎಚ್.ವಿ.; ಎಂ.ಬಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ